A story from Upanishad

ಪ್ರಾಣ

ಒಂದಾನೊಂದು ಕಾಡಿನಲ್ಲಿ ಇಬ್ಬರು ಮುನಿಗಳು ಒಂದು ಆಶ್ರಮವನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಶೌನಕ ಕೌಪೇಯ ಮತ್ತು ಅಭಿಪ್ರತಾರೀಕಾಕ್ಷಸೇನಿ ಇವರೇ ಆ ಇಬ್ಬರು ಮುನಿಗಳು. ಇಬ್ಬರೂ ಯಜ್ಞಯಾಗಾದಿಗಳನ್ನು ಮಾಡುವುದಕ್ಕೆ ಹೆಸರಾಗಿದ್ದರು. ಪ್ರತಿನಿತ್ಯ ದೇವತಾಪೂಜೆ, ಹವನ ಹೋಮ ತಪ್ಪದೆ ಆಶ್ರಮದ ಮುಂದೆ ನಡೆಯುತ್ತಿದ್ದಿತು. ಈ ಮುನಿಗಳೊಂದಿಗೆ ಕಾಡಿನಲ್ಲೇ ವಾಸವಾಗಿದ್ದ ಇತರ ಮುನಿಗಳೂ ಸೇರಿಕೊಳ್ಳುತ್ತಿದ್ದರು.

ಶೌನಕ ಕೌಪೇಯ ಹಾಗೂ ಅಭಿಪ್ರತಾರೀಕಾಕ್ಷಸೇನಿ ಇಬ್ಬರೂ ಸಕಲ ಜೀವಗಳಲ್ಲೂ ಉಸಿರಾಗಿ ಇರುವ ವಾಯುದೇವರ ಆರಾಧಕರಾಗಿದ್ದರು. ಹವನ ಹೋಮ ಕೈ೦ಕರ್ಯಗಳ ತರುವಾಯ ದಿನದ ಹೆಚ್ಚಿನ ಸಮಯವನ್ನು ವಾಯುದೇವನ ಆರಾಧನೆಯಲ್ಲೆ ಕಳೆಯುತ್ತಿದ್ದರು.

ಒಂದುದಿನ ಮಟಮಟ ಮಧ್ಯಾಹ್ನ ಇಬ್ಬರೂ ಮುನಿಗಳು ದೇವತಾಕಾರ್ಯಗಳಾದ ಬಳಿಕ ಊಟ ಮಾಡಲು ಕುಳಿತುಕೊಂದರು. ಆಶ್ರಮದ ಹೊರಗೆ ಭಾರಿ ಬಿಸಿಲಿದ್ದಿತು. ಆ ಸಮಯಕ್ಕೆ ಸರಿಯಾಗಿ ಎಲ್ಲಿಂದಲೋ ಒಬ್ಬ ಬ್ರಹ್ಮಚಾರಿ ಅಲ್ಲಿಗಾಗಮಿಸಿದನು. ಅವನ ಕೈಯಲ್ಲೊಂದು ಭಿಕ್ಷಾ ಪಾತ್ರೆಯಿದ್ದಿತು.

ಬ್ರಹ್ಮಚಾರಿಯನ್ನು ನೋಡಿದೊಡನೆ ಮುನಿಗಲಿಬ್ಬರಿಗೂ ಆ ಹುಡುಗ 'ಭವತಿಭಿಕ್ಷಾಂದೇಹಿ' ಎಂದುಕೊಂಡೇ ಬಂದಿದ್ದಾನೆಂದು ಅರಿವಾಯಿತು.

ಶೌನಕ ಕೌಪೇಯನು, 'ಏಯ್ ಹುಡುಗ, ಇಲ್ಲೇನು ನೋಡುತ್ತಿರುವೆ? ನಿನಗೆ ಭಿಕ್ಷೆ ಹಾಕಲು ನಮ್ಮಲ್ಲೇನೂ ಇಲ್ಲ. ನೀನು ಇಲ್ಲಿಂದ ಹೋಗಬಹುದು' ಎಂದುಬಿಟ್ಟನು. ಅವನೊಂದಿಗೆ ಅಭಿಪ್ರತಾರೀಕಾಕ್ಷಸೇನಿಯೂ ದನಿಗೂಡಿಸಿದನು.

ಬ್ರಹ್ಮಚಾರಿ ಸಾಮನ್ಯ ಹುಡುಗನಾಗಿರಲಿಲ್ಲ. ಬುದ್ಧಿವಂತನೂ ವಿಚಾರವನ್ತನೂ ಆಗಿದ್ದನು. 'ಮುನಿವರ್ಯರೇ, ತಾವುಗಳು ದಿನನಿತ್ಯ ಯಾವ ದೇವತೆಯನ್ನು ಆರಾಧಿಸುವಿರಿ? ನೀವು ಪೂಜಿಸುವ ಆ ದೇವರಾರು?' ಎಂದು ಪ್ರಶ್ನಿಸಿದನು.

'ಈ ಹುದುಗನಿಗೆಕೆ ಈ ವಿವರವೆಲ್ಲ?' ಎಂದು ಮುನಿಗಳಿಬ್ಬರೂ ಮನಸ್ಸಿನಲ್ಲೇ ಗೊಣಗಿಕೊಂಡರು. ಆದರೂ ಪ್ರಶ್ನೆಗೆ ಉತ್ತರಿಸಬೇಕಾದುದು ಧರ್ಮವೆಂದು, 'ನೋಡಯ್ಯಾ, ನಮಗೆ ಊಟಕ್ಕೆ ಹೊತ್ತಾಯಿತು. ನಾವು ಪೂಜಿಸುವುದು ಎಲ್ಲರ ಪ್ರಾಣವೂ ಜೀವವೂ ಉಸಿರೂ ಆದ ವಾಯುದೆವರನ್ನು. ತಿಳಿಯಿತೆ? ಇನ್ನೊ ಇಲ್ಲಿಂದ ಹೋಗು' ಎಂದರು.

ಬ್ರಹ್ಮಚಾರಿ ಮತ್ತೆ ಮಾತನಾಡಿ, 'ಸರಿಯೇ, ಹಾಗಾದರೆ ಆ ಪ್ರಾಣ ಇಡೀ ಬ್ರಹ್ಮಾಂಡವನ್ನೇ ಆವರಿಸಿದ್ದಾನೆಂದೂ ನಿಮಗೆ ತಿಳಿದಿದೆಯಲ್ಲವೇ? ಅಷ್ಟೇಕೆ? ಜಗತ್ತಿನಲ್ಲಿ ಎಲ್ಲಡೆಯಲ್ಲಿಯೂ ಪ್ರಾಣನಿದ್ದಾನೆ. ಚಲಿಸುವ ಹಾಗೂ ಚಲಿಸದ ಯಾವುದೇ ಇರಲಿ ಅದು ಪ್ರಾಣನೇ ತಾನೆ?' ಎಂದು ಹೇಳಿದನು.

ಆಗ ಒಬ್ಬ ಮುನಿ, 'ಏಯ್ ಹುಡುಗ, ನಿನ್ನದು ಅತಿ ಮಾತಾಯಿತು. ಅವೆಲ್ಲ ನಮಗೂ ಗೊತ್ತಿದೆ. ಈಗ ನೀನು ನಿನ್ನ ದಾರಿ ಹಿಡಿದು ಹೋಗು' ಎಂದನು.

ಬ್ರಹ್ಮಚಾರಿ ಮುಗುಳ್ನಗುತ್ತಾ, 'ಮುನಿವರ್ಯರೇ, ತಾವೂ ಪೂಜ್ಯರು, ಹಿರಿಯರು. ನನ್ನದು ಇನ್ನೊಂದೇ ಪ್ರಶ್ನೆ. ನೀವು ಊಟ ಮಾಡುವ ಮೊದಲು ನೈವೇದ್ಯವೆಂದು ಅದನ್ನು ಯಾರಿಗೆ ಅರ್ಪಿಸುವಿರಿ?' ಎಂದು ಕೇಳಿದನು.

ಮುನಿಗಳು, 'ಈಗ ಹೇಳಲಿಲ್ಲವೇ? ನಾವು ಆರಾಧಿಸುವ ಆ ಪ್ರಾಣನಿಗೇ ಅಂದರೆ ವಾಯುವಿಗೆ ಅರ್ಪಿಸುತ್ತೇವೆ' ಎಂದರು.

ಆಗ ಬ್ರಹ್ಮಚಾರಿ, 'ನೀವು ಆರಾಧಿಸುವ ಆ ವಾಯು ಅಂದರೆ ಪ್ರಾಣ ಇಡೀ ಬ್ರಹ್ಮಾಂಡವನ್ನು ಆವರಿಸಿರುವಂತೆ ನನ್ನಲ್ಲೂ ಇದ್ದಾನೆ ಅಲ್ಲವೇ?' ಎಂದು ಪ್ರಶ್ನಿಸಿದನು.

ಶೌನಕ ಕೌಪೇಯನು, 'ಹೌದು. ನಿಸ್ಸಂದೇಹವಾಗಿ. ಎಲ್ಲರಲ್ಲೂ ಇರುವ ಪ್ರಾಣ ನಿನ್ನಲ್ಲಿಯೂ ಇರುವನಷ್ಟೇ' ಎಂದನು.

ಬ್ರಹ್ಮಚಾರಿ, 'ಅಂದಮೇಲೆ ನನ್ನಲ್ಲೂ ಪ್ರಾನನಿದ್ದಾನೆ. ನೀವು ಯಾವ ದೇವರಿಗಾಗಿ ನೈವೇದ್ಯ ಅರ್ಪಿಸುತ್ತೀರೋ ಆ ದೇವರು, ಅಂದರೆ ಪ್ರಾಣ ನನ್ನ್ಲಿರುವನೆಂದ ಮೇಲೆ ನೀವು ನನಗೆ ಅನ್ನ ನೀಡಲು ಒಲ್ಲೆ ಎಂದರೆ ಆ ಪ್ರಾಣನಿಗೆ ನೀಡಿದಂತಾಗುವುದೇ? ಇದನ್ನು ನಿಮ್ಮ ದೇವರು ಒಪ್ಪುವನೆ?' ಎಂದು ಮುನಿಗಲಿಬ್ಬರನ್ನೂ ಸಂದಿಗ್ಧದಲ್ಲಿ ಸಿಕ್ಕಿಸಿದನು.

ಇಬ್ಬರು ಮುನಿಗಳು ಹುದುಗನಾಡಿದ ಮಾತಿನ ಅರ್ಥವನ್ನು ಗ್ರಹಿಸಿದರು. ಕೇವಲ ವೇದಶಾಸ್ತ್ರಗಳನ್ನೋದಿದರಾಗಲಿಲ್ಲ. ಪ್ರಾಯೋಗಿಕವಾಗಿಯೂ ತಿಲಿಯಲೆತ್ನಿಸಬೇಕೆಂದುಕೊಂಡರು. ತಮ್ಮ ವರ್ತನೆಗಾಗಿ ನಾಚಿಕೊಂಡರು. ತಾವು ಸೇವಿಸಲು ಸಿದ್ಧಪಡಿಸಿದ್ದ ಆಹಾರವನ್ನು ಹುಡುಗನಿಗೂ ಇತ್ತು, ಎಲ್ಲ ಒಟ್ಟಿಗೆ ಊಟ ಮಾಡಿದರು. ಬಳಿಕ ಬ್ರಹ್ಮಚಾರಿ ತನ್ನ ದಾರಿ ಹಿಡಿದನು.

Comments

Popular Posts