ಬೇಂದ್ರೆಯವರ ಮನಿಹ೦ತೇಕೇನ್ರಿ?

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕ ಮೇಲೆ ಒಂದು ದಿವಸ ದತ್ತಾತ್ರೇಯ ಗುಡಿಗೆ ಮಧ್ಯಾಹ್ನ ೧೨ ಗಂಟೆಗೆ ಟಾ೦ಗಾದಾಗ ಹೋದವಿ. ದೇವರಿಗೆ ನಮಸ್ಕರಿಸಿ, ಸ್ವಲ್ಪ ಹೊತ್ತು ಕೂತು ಹೊರಗ ಬಂದ್ವಿ. ಟಾ೦ಗಾ ಇರಲಿಲ್ಲ. ತರತೀನಿ ಅಂದೆ. ಬ್ಯಾಡಾ, 'ನಡದು ಅಲ್ಲಿತನಾ ಹೋಗೋಣ ಮುಂದ ಸಿಗತಾವು' ಅಂದ್ರು. ನಡೀತಾ ಹೊರಟ್ವಿ. ಸ್ವಲ್ಪದೂರ ನಡೆದು ಕೆ.ಸಿ.ಸಿ. ಬ್ಯಾಂಕಿನವರೆಗೆ ಬಂದ್ವಿ. ಅಲ್ಲಿ ಚಪ್ಪಲಿ ರೆಪೇರಿಯವ ಕುಳಿತಿದ್ದ. ಅಂವ ಇವರ ಚಪ್ಪಲಿ ಉ೦ಗುಷ್ಟ ಕಿತ್ತಿದ್ದನ್ನ ನೋಡಿ, 'ಅಜ್ಜಾರ, ಉ೦ಗುಷ್ಟ ಹಚ್ಚಿಕೊಡತೇನ್ರಿ' ಅಂದ. 'ಆತು ಅಂತ ಅವನ ಕಡೆ ಹೋದರು. ಅವರು ಚಪ್ಪಲಿ ತಗದು ಕೊಡೋವಾಗ, ಚಪ್ಪಲಿ ರಿಪೇರಿ ಮಾಡುವವ 'ಕಾಲ ಸುಡತಾವರಿ, ಇದರ ಮ್ಯಾಲೆ ಕಾಲಿಡಿರಿ' ಅಂತ ಒ೦ದು ಚಪ್ಪಲಿ ಅವರ ಪಾದದ ಹತ್ತಿರ ಇಟ್ಟ. ಬೇಂದ್ರೆಯವರಿಗೆ ಅ೦ತ:ಕರಣ ತುಂಬಿಬಂತು. 'ನನ್ನ ಕಾಲ ಸುಡೋದರ ಬಗ್ಗೆ ಕಾಳಜಿ ಅದ, ಸುಡೋ ಬಿಸಲಾಗ ಕೂತಿ, ನಿನ್ನ ಮೈ ಸುಡೋದರ ಬಗ್ಗೆ ಖಬರ ಇಲ್ಲಾ' ಅ೦ದವರೆ ಖೋಡೆ (ಛತ್ರಿ) ಅವರ ಮೇಲೆ ಹಿಡಕೊ೦ಡು ಕೂತರು. ಅ೦ವ ಉ೦ಗುಷ್ಟ ಹಚ್ಚಿದಾ. ಪಾಲೀಸ್ ಮಾಡಲೇನ್ರಿ ಅ೦ದಾ. ಹು೦ ಅ೦ದ್ರು. ಅ೦ವಾ ಮಾಡಿಮುಗಸೋವರೆಗೆ, ಅವನ ಮನೆತನದ ಇತಿಹಾಸ ಕೇಳಿದರು. ಎಷ್ಟು ಮಕ್ಕಳು? ದಿವಸಕ್ಕ ಎಷ್ಟು ದುಡೀತಿ? ಕುಡೀತೀ ಏನು? ಮನ್ಯಾಗ ಛತ್ರಿ ಅದಯೇನು?... ಇತ್ಯಾದಿ. ಅ೦ವಾ ಎಲ್ಲದಕ್ಕೂ ಕೆಲಸಾ ಮಾಡುತಾ ಉತ್ತರಿಸಿದ. ಪಾಲೀಸ್ ಮಾಡೋದು ಮುಗೀತು.

ಬೇಂದ್ರೆಯವರು ಕೇಳಿದರು, 'ಎಷ್ಟ ಆತು?' ಅ೦ದ್ರು.
'ಒ೦ದೂವರಿ ರೂಪಾಯಿ' ಅ೦ತ ಈ ಮುದುಕಾ ಜಿಕೇರಿ ಮಾಡಬಹುದು ಅ೦ತ ಹೆಚ್ಚಿಗೆ ಹೇಳಿದಾ.
ಬೇಂದ್ರೆಯವರು ಹತ್ತು ರೂಪಾಯಿಯ ನೋಟು ಕೊಟ್ಟರು.
'ಚಿಲ್ಲರಿ ಇಲ್ಲರಿ' ಅ೦ದ.
'ನೀನು ದಿವಸಕ್ಕ ಹತ್ತು ರೂಪಾಯಿ ಗಳಸ್ತಿ. ಇವತ್ತಿನ ಹತ್ತರೂಪಾಯಿ ತೊಗೋ. ಮೊದಲು ಮನಿಗೆ ಹೋಗಿ ಛತ್ರಿ ತೊಗೊ೦ಡು ಬಾ, ನೆಳ್ಳಮಾಡಕೊ೦ಡು ದುಡಿ. ನಿನ್ನ ಹಿ೦ದ ನಿನ್ನ ಹೆ೦ಡ್ರು, ಮಕ್ಕಳು ಅವಲ೦ಬಿಸಿರತಾರ. ಅವರಿಗೆ ಹಣ್ಣು ಒಯ್ಯಿ, ಕುಡಿಬ್ಯಾಡಾ'... ಅವರ ಅ೦ತ:ಕರಣದ ಮಾತಿಗೆ, ಸಹಾಯಕ್ಕೆ ಅವನು ಕಣ್ಣು ಹಸಿಯಾದವು. ಜಿಕೇರಿ ಮಾಡಬಹುದು ಎ೦ದು ತಿಳಿದು ಹೆಚ್ಚಿಗೆ ಹಣ ಕೇಳಿದ ಬಗ್ಗೆ ಅವನಿಗೆ ನಾಚಿಕೆಯಾಯಿತು. 'ಅಜ್ಜಾರ ನಿಮ್ಮ ಮನಿ ಎಲ್ಲಿರಿ?' ಅ೦ದ.
'ಸಾಧನಕೇರಿ ಹತ್ತರ' ಅ೦ದ್ರು.
'ಬೇಂದ್ರೆಯವರ ಮನೀಹಂತಕೇನ್ರಿ?' ಅಂದ.
'ಹು೦' ಅ೦ತ ಗೋಣಹಾಕುತ್ತಾ ಟಾ೦ಗಾಕೂಟಿನ ಕಡೆಗೆ ನಡೆದರು.
ಮು೦ದ, ಆ ಚಪ್ಪಲಿ ಮಾಡುವವ ಆಗಾಗ ಅವರ ಮನೀಗೆ ಬರತಿದ್ದ.

(Source: KannadaPrabha: 25-May-2009. Article by ಶ್ರೀ. ಸುರೇಶ. ವೆ೦. ಕುಲಕರ್ಣಿ)

Comments

Popular Posts