Kailasam and Gandhi

(From: ‘ನಾನು ಕಂಡ ಕೈಲಾಸಂ’ - ಕಂದಾಡೆ ಕೃಷ್ಣಯ್ಯಂಗಾರ್, ಕಾವ್ಯಾಲಯ ಪ್ರಕಾಶಕರು, ಮೈಸೂರು)

೧೯೨೭ರಲ್ಲಿ ಗಾಂಧೀಜಿ ಮೂರು ತಿಂಗಳ ಕಾಲ ವಿಶ್ರಾಂತಿಗೆಂದು ಬೆಂಗಳೂರಿನ ಕುಮಾರ ಪಾರ್ಕಿನಲ್ಲಿದ್ದರಷ್ಟೆ. ಅವರ ಮನಸ್ಸನ್ನು ಉಲ್ಲಾಸಗೊಳಿಸಲು ಭಕ್ತರಾದವರು ನಾನಾ ಪ್ರಯತ್ನಗಳನ್ನು ಬಗೆಯುತ್ತಿದ್ದರು. ಆಗ ಕೈಲಾಸಮಿನ ಮಿತ್ರರು ‘ಏಕಲವ್ಯ’ ನಾಟಕವನ್ನು ಮಹಾತ್ಮಾಜಿಯವರು ಕೇಳುವಂತೆಸಗಲು ಸಂಧಾನಪರರಾದರು. ಎರಡುಕಡೆಯಲ್ಲಿಯೂ ಮಿತ್ರರಿಗೆ ಕಷ್ಟವೇ ಎದುರುಬಂತು. ಮದೇವಭಾಯಿ ಮೂಲಕ ಮಹಾತ್ಮಾಜಿಯನ್ನು "ಒಂದು ಗಂಟೆಕಾಲ ಮಾತ್ರ ಅತ್ಯುತ್ತಮ ಸಾಹಿತ್ಯಕ್ಕೆ ಸೇರಿದ ನಾಟಕವನ್ನು ಕೇಳಲು ಕೊಡಬೇಕು! ಅದನ್ನು ರಚಿಸಿದಾತನೇ ಅಭಿನಯಿಸಿ ಹೇಳುತ್ತಾನೆ" ಎಂಬುದಾಗಿ ಕೇಳಿಸಿದ್ದಾಯಿತು. "ನಾಟಕವನ್ನು ಕೇಳುವುದೇ! ನನಗೆ ಹೊತ್ತಿಲ್ಲ"ವೆಂಬುದಾಗಿ ನುಡಿದನು ಆ ಹೊತ್ತಿನ ಜಿಪುಣ. ಮತ್ತೊಮ್ಮೆ ಯತ್ನ ನಡೆಯಿತು; ಆಗಲೂ ಅದೇ ರೀತಿಯಲ್ಲಿ ವಿಫಲವಾಯಿತು. ಗಾಂಧೀಜಿಯವರನ್ನೊಪ್ಪಿಸುವುದೆಷ್ಟು ಕಷ್ಟವೆನ್ನಿಸಿತೋ ಈತನನ್ನದಕ್ಕೊಪ್ಪಿಸುವುದೂ ಅಷ್ಟೇ ಕಷ್ಟವಾಯಿತು. "ಆತನೆದುರಿಗೆ ನಾನು ನಾಟಕವನ್ನೊಪ್ಪಿಸುವುದೇ! ಶಾಂತಂ ಪಾಪಂ, ಶಾಂತಂ ಪಾಪಂ!" ಎನ್ನುತ್ತಿದ್ದನು ಕೈಲಾಸಂ. ಕಡೆಗೆ ಮಹಾದೇವಭಾಯಿ ಆ ನಾಟಕವನ್ನು ಕೇಳಿ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದನು. ಅದೇ ಸಮಯದಲ್ಲಿಯೇ ಆ ಕೊಠಡಿಯಲ್ಲಿದ್ದ ಶ್ರೀ.ಸಿ.ರಾಜಗೋಪಾಲಾಚಾರ್ಯ, ಗಂಗಾಧರರಾವ್ ದೇಶಪಾಂಡೆ, ದೇವದಾಸ್ ಗಾಂಧಿಯವರನ್ನು ವಿನೋದಗೊಳಿಸುತ್ತ ಸರ್.ವಿ.ಭಾಷ್ಯಂ ಅಯ್ಯಂಗಾರ್ಯರನ್ನು ಅನುಕರಿಸಿದನು. ದೇವದಾಸ ಗಾಂಧಿಯನ್ನು ‘Bapulet’ - ‘ಬಾಪು ಮರಿ’ಯೆಂದು ಕರೆದು ಬಿಟ್ಟನು.

ಗಾಂಧೀಜಿಯವರು ‘ಏಕಲವ್ಯ’ ನಾಟಕವನ್ನು ಕೇಳಲು ಅವಕಾಶವನ್ನು ಕೊಡಲಿಲ್ಲ; ಅದರಿಂದ ಕೈಲಾಸಮಿಗೆ ಯಾವುದೋ ಒಂದು ಗಂಡಾಂತರ ತಪ್ಪಿದಂತೆಯೇ ಆಯಿತು. ಗಾಂಧೀಜಿಯವರಲ್ಲಿ ಕೈಲಾಸಮಿನ ಭಕ್ತಿ ಆಳವಾದುದು. ಯಾವುದೋ ಸಮಯದಲ್ಲಿ ಹೊರಗೆ ಕಾಣಿಸಿಕೊಳ್ಳುತ್ತದೆ. ಕಳೆದವರ್ಷ ಜುಲೈ ೨೯ನೇ ತಾರೀಖು (೧೯೨೭) ಕೈಲಾಸಂ ‘ವಿಪ್ರಶಾಪ’ವನ್ನು ತುಂಬಿದ ಸಭೆಗೊಪ್ಪಿಸಿದನಷ್ಟೆ! ಆತನ ಪಠನ ಮುಕಾಯವಾಗಿ ಧನ್ಯವಾದಗಳು ಮುಗಿಯುವ ವೇಳೆಗೆ ಕಾಲೇಜ್ ವಿದ್ಯಾರ್ಥಿಗಳ ತಂಡವೊಂದು ವೇದಿಕೆಯನ್ನು ಮುತ್ತಿ ಸುತ್ತುಗಟ್ಟಿತು. ಆ ವಿದ್ಯಾರ್ಥಿಗಳಿಗೇನಾದರೂ ಉಪದೇಶಮಾಡಬೇಕೆಂಬ ಸೂಚನೆಯಾಯಿತು. ಆಗ ಕೈಲಾಸಂ "ಉಪದೇಶ ಕೊಡುವುದೆಂಬುದು ಹಾನಿಕರವಾದ ರೋಗಗಳಲ್ಲೊಂದು" ಎನ್ನುತ್ತ ಆ ಯುವಕರನ್ನು ಕುರಿತು ಸಹಜವಾದ ವೇಗದಿಂದ "ನನ್ನನ್ನೇಕೆ ಕೇಳಬೇಕು ನೀವು ಹಿತೋಕ್ತಿಯೆಂದು ಅಲ್ಲಿ ಬಾಪೂಜಿಯಿರುವಾಗ! ಆತನಿಗಿಂತ ನಿಮಗೆ ಆದರ್ಶ ಪುರುಷ ದೊರಕಿಯಾನೆ! ಸಾಧ್ಯವಾದಷ್ಟು ಆತನಂತಾಗಿ, ಸಾಧ್ಯವಾದಷ್ಟು ಕೈಲಾಸಮಿನಂತಾಗದಿರಿ!" ಎಂದುಬಿಟ್ಟನು. ಯುವಕರಲ್ಲಿಗೂ ಬಿಡದಿರಲು ಕೈಲಾಸಂ "ಹೋಗಿ ನಗುತ್ತಲಿರಿ - ಚೆನ್ನಾಗಿ ನಗುವುದನ್ನು ಅಭ್ಯಾಸ ಮಾಡಿ. ಕಾರಣ ಕಂಡಾಗ ನಕ್ಕು ಸಂತೋಷಚಿತ್ತರಾಗಿರಿ. ಕಾರಣಕಾಣದಿದ್ದರೂ ನಗಿ; ಆಗ ನಿಮ್ಮನ್ನು ಕಂಡು ಇತರರು ನಕ್ಕು ಉಲ್ಲಾಸಗೊಳ್ಳುತ್ತಾರೆ" ಎಂದನು.

Comments

Popular Posts