ಯೇಗ್ದಾಗೆಲ್ಲಾ ಐತೆ - ಮುಕುಂದೂರು ಸ್ವಾಮಿ

ಜಾತಿಯ ಬಗ್ಗೆ ಮುಕುಂದೂರು ಸ್ವಾಮಿಗಳ ಅಭಿಪ್ರಾಯ...

"ಈಗ ನಿಮ್ಮ ವಯಸ್ಸು ಸುಮಾರು ಎಪ್ಪತ್ತೈದು ಇರಬಹುದೇ?"
"ಇದ್ದೀತು" ತಟ್ಟನೇ ಉತ್ತರಿಸಿದರು.
"ನೂರು ಅಂತಾರೆ ಕೆಲವರು" - ನಗುತ್ತಾ ಕೇಳಿದೆ.
"ಇರ್ಲೂ ಬೌದು ಹೇಳು. ಅದೇನ್ ದೊಡ್ಮಾತು" ಎಂದರು.
"ನೂರಿಪ್ಪತ್ತು, ನೂರ ಮೂವತ್ತು ಅಂತಾರಲ್ಲ ಸ್ವಾಮಿ!" - ಮತ್ತೆ ಕೇಳಿದೆ.
"ಆಗ್ಲೇಳೋ ಇವ್ನೇನು ನಿನ್ನೆ ಮೊನ್ನಿನವನಲ್ಲ. ವಯಸ್ಸಿ೦ದೇನು ದೊಡ್ಮಾತು (ನಕ್ಕು) ಬೆಟ್ಟಗುಡ್ಡ, ಹಳ್ಳಕೊಳ್ಳ, ಇವುಕ್ಕೆಲ್ಲ ಎಷ್ಟ್ ವಯಸ್ಸು. ಹೇಳೋರ್ಯಾರು? ಜನ ಸುಮ್ಕೆ ಕೇಳ್ತಾರೆ ಹೇಳ್ತಾರೆ. ಉರು ಕೇರಿ, ಕುಲಗೋತ್ರ, ಹೆಣ್ಣು-ಗಂಡು ಎಲ್ಲ ಇ೦ಗಡಿಸ್ತಾರೆ. ನಾವು ಶಿವಚಾರ್ದೋರು, ನಾವು ದೇವಾ೦ಗದೋರು, ನಾವ್ ಬ್ರಾಮಣರು, ಅದರಾಗ್ ಮತ್ತೆ ನಾಮ್ದೋರು, ಅಡ್ಡ ಗ೦ಧದೋರು, ಮುದ್ರೇರು, ಅವ್ರು ಇವ್ರು ಒಬ್ಬರನ್ನ ಕ೦ಡ್ರೆ ಒಬ್ಬರು ಮಾರ್ ದೂರ ಹೋಗ್ತಾರೆ. ಮಡಿ ಮೈಲಿಗೆ ಅಂತಾರೆ. ನಗು ಬರ್ತೈತೆ. ನಕ್ಕರೆ ಬೈತಾರೆ. ಎಲ್ಲ ಹುಚ್ಚರಾಟ. ಹುಚ್ಚರ ಸಂತ್ಯಾಗ ತಲೆ ನೆಟ್-ಗಿದ್ದೊನೆ ದಡ್ಡ. (ನಗುತ್ತಾ) ಈಗ ನೋಡು ಶಿವಾಚಾರ ಅಂದ್ರೆ ಅವ್ರ ಆಚಾರ ಶಿವನಿಗಾಗಿ ಇರ್ಬೇಕು. ಅದೇ ರೀತಿ ದೇವಾ೦ಗದೋರು ಅಂದ್ರೆ ಎಲ್ಲ ದೇವಾ೦ಗದೋರೇ! ಅಂಗ ದೇವರದೇ ಅಲ್ವೇ?! ಅದರಂತೆ ನಾಮ, ಅಡ್ಡ ಗ೦ಧ, ಮುದ್ರೆ, ಈಭೂತಿ ಎಲ್ಲ ಅಷ್ಟೇ. ಬರೇ ಹೊರಗಳ ಯಾಪಾರ ಹಿಡಿದು ಬಡಿದಾಡ್ತಾರೆ". ಅವರ ಸಮಷ್ಟಿ ವಿಚಾರದಲ್ಲಿ ದಾರಿ ನಡೆದಿದ್ದೆ ಕಾಣಲಿಲ್ಲ.
* * * *
ಈ ಮಾತನ್ನು ಹೇಳಿದ್ದು ಕಳೆದ ಶತಮಾನ ಕಂಡ ಒಬ್ಬ ಸಂತರು, ಮುಕು೦ದೂರು ಸ್ವಾಮಿಗಳು ಎಂದೇ ಪರಿಚಿತರಾದ ಒಬ್ಬ ಅವಧೂತರು. ಸುಮಾರು ಮೂರೂ ವರ್ಷಗಳ ಹಿಂದೆ ಈ ಸ್ವಾಮಿಗಳ ಕುರಿತಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಉಪನ್ಯಾಸವನ್ನು ಕೇಳಿದ್ದೆ. ಇತ್ತೀಚಿಗೆ, ನನ್ನ ಆತ್ಮೀಯ ಮಿತ್ರರೊಬ್ಬರು ಕೃಷ್ಣಶಾಸ್ತ್ರಿಗಳು ಬರೆದ "ಯೇಗ್ದಾಗೆಲ್ಲಾ ಐತೆ" ಎಂಬ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು. ಒಂದೇ ಸಲಕ್ಕೆ ಓದಿ ಮುಗಿಸಿದೆ. ಇದರಲ್ಲಿಯ ಕೆಲವು ವಿಶಿಷ್ಟ ಪ್ರಸಂಗಗಳನ್ನು ಇಲ್ಲಿ ದಾಖಲಿಸುವ ಒಂದು ಚಿಕ್ಕ ಪ್ರಯತ್ನ ಇದಾಗಿದೆ.
* * * *
ಮುಕುಂದೂರು ಸ್ವಾಮಿಗಳ ಗೀತೋಪನ್ಯಾಸ...

ಮುಕುಂದೂರು ಸ್ವಾಮಿಗಳು ಶಾಲೆಯಲ್ಲಿ ಕಲಿತವರಲ್ಲ. ನಮ್ಮ ನಿಮ್ಮ ಲೆಕ್ಕದಲ್ಲಿ ಒಬ್ಬ ನಿರಕ್ಷರಕುಕ್ಷಿ. ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಓದಿ ಬಲ್ಲವರಲ್ಲ. ಇಂತಹವರನ್ನು ಕಂಡರಾಗದ ದೇವನೂರಿನ ಕೆಲವರು, ಒಮ್ಮೆ ಇವರ ಅಜ್ಞಾನವನ್ನು ಬೆಳಕಿಗೆ ಎಳೆದು, ಅವಮಾನ ಮಾಡಿ ಓಡಿಸಬೇಕೆಂದು ತೀರ್ಮಾನಿಸಿ, ದೇವನೂರಿನ ಕನ್ನಡ ಸಂಘದ 'ಗೀತಾ ಜಯಂತಿ' ಪ್ರಯುಕ್ತವಾಗಿ ಗೀತೋಪದೇಶ ಮಾಡಲು ಇವರನ್ನು ಕರೆದು ಒತ್ತಾಯಿಸುತ್ತಾರೆ. ಆಗ ನಡೆದ ಪ್ರಸಂಗ ವೈಶಿಷ್ಟ್ಯವಾದುದು:

ತಕ್ಷಣವೇ ಎದ್ದ ರಾಘವ ಅಯ್ಯಂಗಾರ್ಯರು "ನನ್ನ ಮೇಲೆ ಗೌರವ ಮತ್ತು ಅಭಿಮಾನದ ಮಾತುಗಳನ್ನಾಡುತ್ತಿದ್ದೀರಿ. ಆದರೆ ಈ ಸಭೆಗೆ ಒಬ್ಬ ಯೋಗೀಶ್ವರರು ದಯೆ ಮಾಡಿಸಿದ್ದಾರೆ. ಶ್ರೀಕೃಷ್ಣನು ಒಬ್ಬ ಯೋಗೀಶ್ವರ. ಒಬ್ಬ ಯೋಗೀಶ್ವರ ಹೇಳಿದ ಗೀತೆಯ ಸಾರವನ್ನು ಮತ್ತೊಬ್ಬ ಯೋಗೀಶ್ವರರಿಂದ ಕೇಳುವ ಅವಕಾಶ ಮಾಡಿಕೊಳ್ಳೋಣ. ನಾನಂತೂ ಮಾತನಾಡುವುದಿಲ್ಲ. ಈ ಸಭೆಯಲ್ಲಿ ಯಾರಿಗೂ ಗೀತೋಪನ್ಯಾಸ ಮಾಡುವ ಅಧಿಕಾರವಿಲ್ಲ. ಮುಕುಂದೂರು ಸ್ವಾಮಿಗಳೇ ಗೀತೆಯನ್ನು ನಮಗೆಲ್ಲ ಬೋಧಿಸಬೇಕು. ನಾವೆಲ್ಲ ಕೃತಾರ್ಥರಾಗಬೇಕು" ಎಂದು ಹೇಳಿ ಸ್ವಾಮಿಗಳಿಗೆ ಉಪಚಾರದ ಮುಳ್ಳಿನ ಕಿರೀಟವನ್ನಿತ್ತು ತಮ್ಮ ಹೆಬ್ಬಯಕೆ ಈಡೇರುವುದೆಂಬ ಸಂತೋಷದಿಂದ ನಗುತ್ತಾ ಕುಳಿತರು.

ಸ್ವಾಮಿಗಳಂತೂ ನಿಶ್ಚಿಂತರಾಗಿ ಹಸನ್ಮುಖರಾಗಿಯೇ ಕುಳಿತಿದ್ದಾರೆ. ಮುಗ್ಧ ಸಭಿಕರು ಮೌನದಿಂದ ನಿರೀಕ್ಷಿಸುತ್ತಿದ್ದಾರೆ. ಒಬ್ಬರು ನನ್ನಲ್ಲಿಗೆ ಬಂದು, "ಸ್ವಾಮಿಗಳಿಗೆ ಅರ್ಥವೇ ಆಗಿಲ್ಲವೆಂದು ತೋರುತ್ತದೆ. ಉಪನ್ಯಾಸ ಮಾಡಬೇಕೆಂದು ನೀವೇ ಮತ್ತೊಮ್ಮೆ ಹೇಳಿ" ಎಂದು ನಕ್ಕಾಗ ನನ್ನ ಬೆನ್ನಿಗೆ ಬರೆ ಹಾಕಿದಂತಾಯಿತು. ಗತ್ಯಂತರವಿಲ್ಲದೆ ಸ್ವಾಮಿಗಳನ್ನು ಸಮೀಪಿಸಿ ನೀವೇ ಮಾತನಾಡಬೇಕ೦ತೆ ಎಂದೆ.

"ನೀನೊಳ್ಳೆ ಮೇಷ್ಟ್ರಾದೆ, ಏನೂ ಹೇಳಿಕೊಡದೇನೆ ಈಗಲೇ ಪಾಠ ಒಪ್ಪಿಸೂ ಅಂದ್ರೆ ಎ೦ಗೆ" ಎನ್ನುತ್ತಿದ್ದಂತೆಯೇ ಜನ ಗೊಳ್ಳೆಂದು ನಕ್ಕರು.

"ಹೂಂ... ಇದಕ್ಕೇ ಮತ್ತೆ ಹುಡುಗ್ರು ಇಸ್ಕೂಲ್ಗೆ ಹೋಗು ಅಂದ್ರೆ ಅಳ್ತಾವೆ!" ಸಭಿಕರೆಲ್ಲ ಮತ್ತೆ ಮತ್ತೆ ನಕ್ಕರು.

ಸಭೆ ನಡೆಯುತ್ತಿದ್ದದು ದೇವನೂರಿನ ಶಾಲೆಯ ಅಂಗಳದಲ್ಲಿ. ತಾವು ಕುಳಿತ್ತಿದ್ದ ಕುರ್ಚಿಯನ್ನು ತೋರಿಸಿ "ಇವನ್ಯಾಕೋ ಒಂದೀಟು ಕಿರಿಕಿರಿ ಮಾಡ್ತಾನಪ್ಪಾ. ಇವ್ನು ಬ್ಯಾಡ (ಮೇಜಿನ ಮೇಲೆ ಕೈಯಾಡಿಸಿ) ಇವ್ನೊಳೆ ಆರಾಮವಾಗಿದಾನೆ. ಇವ್ನ ಮ್ಯಾಲೆ ಕುಂತ್ಕೊಬಹುದೋ" ಎಂದಾಗ ಆಗಬಹುದು ಎಂದರು ಅಧ್ಯಕ್ಷರು. ಸ್ವಾಮಿಗಳು ಮುಂದಿದ್ದ ದೊಡ್ಡ ಮೇಜಿನ ಮೇಲೆ ಪದ್ಮಾಸನದಲ್ಲಿ ಕುಳಿತು ತಮ್ಮ ಬಟ್ಟೆಗಳನ್ನು ನೇವರಿಸಿಕೊಳ್ಳುತ್ತಾ ತಮಗೆ ತಾವೇ,

"ಎಲೇ, ಇದು ಇಸ್ಕೋಲು. ಸರಿಯಾಗಿ ಪಾಟ ಒಪ್ಸು. ತಪ್ಪಿದರೆ ಛಡಿ ಏಟು ಬೀಳ್ತಾವೆ" ಎಂದಾಗ ಜನ ಬಿದ್ದು ಬಿದ್ದು ನಕ್ಕರು.

ನಿಜಗುಣರ ಒಂದು ಹಾಡನ್ನು ಹೇಳಿ, ಪ್ರವಚನವನ್ನು ಪ್ರಾರಂಭಿಸಿದರು. ಸಮಯ ಹೋದದ್ದೇ ಜನಕ್ಕೆ ತಿಳಿಯಲಿಲ್ಲ. ಪಟೇಲ ಮಹಮದ್ ಹಯಾತ್ ಸಾಹೇಬರು ಯಾವಾಗಲೋ ಎದ್ದು ಹೋಗಿ ಒಂದು ಪೆಟ್ರೊಮ್ಯಾಕ್ಸ್ ದೀಪ ಹಚ್ಚಿಕೊಂಡು ಬಂದರು. ಆಗಲೇ ಜನರಿಗೆ ಕಟ್ಟಲಾಗಿದೆ ಎಂದು ತಿಳಿದದ್ದು. "ಹೊಟ್ಟೆ ಗೊತ್ತಾಗಲಿಲ್ಲವಲ್ಲ ಆಗಲೇ ಕತ್ತಲಾಗಿಬಿತ್ತಿದೆ!" ಎಂದು ಸಭಿಕರು ಆಡಿದಾಗ -

"ಎಲೇ! ಕೇಳೋರು ಕೇಳೇ ಕೇಳ್ತಾರೆ ಅಂದ್ರೆ ಯೇಳೇ ಯೇಳ್ತೀಯಲ್ಲೋ, ಸಾಕು ಎದ್ದು ನಡಿ" - ಎಂದು ತಮ್ಮ ತೊಡೆಗೆ ಒಂದು ಏಟು ಕೊಟ್ಟು ಮೇಜಿನಿಂದ ಧುಮುಕಿ ಹೊರಗೆ ಓಡಿದರು. ಜನರೆಲ್ಲ ಕೂಗುತ್ತಾ ಕೇಕೇ ಹಾಕುತ್ತಾ ಅವರ ಹಿಂದೆಯೇ ಓಡಿದರು.
* * * *
ಮುಕುಂದೂರು ಸ್ವಾಮಿಗಳು ಮತ್ತು ರಮಣ ಮಹರ್ಷಿ...

ಸಂಜೆಯೊಳಗೆ ಬೋಳನಹಳ್ಳಿ ತಲುಪಿದೆವು. ನಾನು ರಾತ್ರಿಯ ಅಡುಗೆ ಮಾಡಲು ತೊಡಗಿದೆ. ನನ್ನ ರೂಮಿನಲ್ಲಿ ರಮಣ ಮಹರ್ಷಿಗಳ ಪುಸ್ತಕ ಒಂದಿತ್ತು. ಸ್ವಾಮಿಗಳು ಅದನ್ನು ಕೈಗೆತ್ತಿಕೊಂಡು ನೋಡತೊಡಗಿದರು. ಕನ್ನಡ ಅಕ್ಷರದ ಪರಿಚಯವೇ ಇಲ್ಲದ ಅವರು ಆ ಇಂಗ್ಲೀಷ್ ಪುಸ್ತಕವನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಾ ಕುಳಿತದ್ದನ್ನು ಕಂಡು ನನಗೆ ನಗು ಬಂತು. ನನ್ನ ಅಡುಗೆ ಆಯಿತಾದರೂ ಅವರು ಇನ್ನೂ ಆ ಪುಸ್ತಕದಲ್ಲೇ ಮಗ್ನರಾಗಿದ್ದರು.

"ಆ ಇಂಗ್ಲಿಷ್ ಪುಸ್ತಕವನ್ನೆಲ್ಲ ಓದಿ ಆಗಿದ್ದರೆ ಊಟಕ್ಕೆ ಏಳಬಹುದಲ್ಲಾ" ಎಂದು ನಕ್ಕೆ. ಅವರೂ ಜೋರಾಗಿ ನಕ್ಕರು.

ಸ್ವಲ್ಪ ದಿನ ಕಳೆದು ಆಶ್ರಮಕ್ಕೆ ಹೋದೆ. ಅಚ್ಚರಿಯೆಂದರೆ ಅವರ ಗುಡಿಸಿಲಿನ ಗೋಡೆಗೆ ಶ್ರೀರಮಣರ ಭಾವಚಿತ್ರವಿದ್ದ ಹಾಳೆಯನ್ನು ಅಂಟಿಸಲಾಗಿತ್ತು. ರಾಗಿ ಮುದ್ದೆಯೇ ಅದಕ್ಕೆ ಉಪಯೋಗಿಸಿದ ಗೋಂದು. ಅದು ನನ್ನ ರೂಮಿನಲ್ಲಿ ಸ್ವಾಮಿಗಳು ನೋಡುತ್ತಿದ್ದ ಪುಸ್ತಕದಿಂದ ಕಿತ್ತು ತಂದಿದ್ದರೆಂದು ಗೊತ್ತಾಯಿತು. ಅಷ್ಟರಲ್ಲಿ ಸ್ವಾಮಿಗಳು ಹೊರಗಿನಿಂದ ಬಂದು "ಅದನ್ನ ನೋಡ್ತೀಯಾ? ಅದು ಓಟೂ ಒಳಕ್ಕೆ ತಗೊಂಡೈತೆ. ಹೊರಗೇನೂ ಇಲ್ಲ. ಎಲ್ಲಾ ಬಟಾಬಯಲು" ಎಂದು ನಕ್ಕು ನುಡಿದರು.

ರಮಣರನ್ನು ಎಂದೂ ಕಂಡು, ಕೇಳಿ ಅರಿಯದ ಇವರು ಆ ಭಾವಚಿತ್ರವನ್ನು ನೋಡಿಯೇ ಏನು ಎಷ್ಟು ಗ್ರಹಿಸಿದ್ದಾರೋ! ಅಂತೂ ಶ್ರೀ ರಮಣರನ್ನು ಕುರಿತು ಅಷ್ಟು ಚುಟುಕಾಗಿ, ಅಷ್ಟು ಸ್ಪಷ್ಟವಾಗಿ ಹೇಳಿದ್ದು ಅಚ್ಚರಿಯೆನಿಸಿ ಅವರತ್ತ ಸುಮ್ಮನೆ ನೋಡುತ್ತಾ ನಿಂತೆ.
* * * *
ದೂರದ ಊರಿನವನೊಬ್ಬಾತ ಆಶ್ರಮಕ್ಕೆ ಬಂದರು. "ಸ್ವಾಮಿ, ನಮ್ಮೂರ್ಗೆ ಒಬ್ಬ ಸಾದ್ಗಳು ಬಂದಿದ್ರು. ಅವರು ಒಂದು ದಿನ್ಕೆ ಐದು ಸಲ ಸ್ನಾನ ಮಾಡ್ತಿದ್ರು. ಸ್ನಾನ ಮಾಡಿ ಪೂಜೆ ಮಾಡ್ದಾಗ ಮಾತ್ರ ಏನ್ಕೊಟ್ರು ತಗ೦ಬ್ತಿದ್ರು. ಸ್ನಾನ ಮಾಡ್ದೆ ಒಂದು ತೊಟ್ಟು ನೀರ್ ಸಹ ಬಾಯ್ಗೆ ಹಾಕ್ತಿರಲಿಲ್ಲ!" - ಎಂದು ಬಣ್ಣ ಬಣ್ಣವಾಗಿ ಆ ಸ್ವಾಮಿಗಳ ವಿಚಾರವನ್ನು ಸೋಜಿಗವೆಂಬಂತೆ ವಿವರಿಸಿದರು.

ಆತನು ಹೇಳಿದ್ದನ್ನೆಲ್ಲಾ ಆಸಕ್ತಿಯಿಂದ ಕೇಳಿದ ಸ್ವಾಮಿಗಳು, "ಆಹಾ! ಅ೦ಗೆನೊ ಅಪ್ಪಯ್ಯ, ಎಂಥಾ ಸಾಧುಗಳಪ್ಪ! ಏನಾಚಾರಾ! ಏನ್ ಕಟ್ ನಿಟ್ಟು! - ಒಳ್ಳೇ ಗಟ್ಟಿ ಸ್ವಾಮಿಗಳು ಅಂತ ಕಾಣುತ್ತೆ ಅಲ್ವೇ?" ಎಂದು ತಾವು ಆಶ್ಚರ್ಯಪಟ್ಟು ನುಡಿದರು. ಆ ಬಂದಾತನಿಗೆ ಬಹಳ ಸಂತೋಷವಾಯಿತು. ಮರುಕ್ಷಣವೇ ಸ್ವಾಮಿಗಳು ನನ್ನ ಕಡೆ ನೋಡುತ್ತಾ "ಏನಪ್ಪಾ, ಅವರು ಮತ್ತೆ ಮತ್ತೆ ಅ೦ಗ್ಯಾಕೆ ಮೈಲಿಗೆ ಆಗ್ತಾರಂತೆ?" ಎಂದಾಗ ಎಲ್ಲರೂ ನಕ್ಕೆವು.

ಆಧಾರ: "ಯೆಗ್ದಾಗೆಲ್ಲಾ ಐತೆ" - ಬೆಳಗೆರೆ ಕೃಷ್ಣಶಾಸ್ತ್ರಿ. ಪ್ರಕಾಶಕರು - ಅಭಿನವ

Comments

Popular Posts