ವೈಯನ್ಕೆ ಬರೆಹದ ಒಂದು ಇಣುಕುನೋಟ
(ವೈ.ಎನ್.ಕೃಷ್ಣಮೂರ್ತಿಯವರು ಕನ್ನಡಪ್ರಭದ ಸಂಪಾದಕ ಹುದ್ದೆಯನ್ನು ಅಲಂಕರಿಸಿದ್ದಾಗ, ಪ್ರತೀ ಗುರುವಾರದಂದು "ವಂಡರ್-ಕಣ್ಣು" ಎಂಬ ಅಂಕಣವನ್ನು ಬರೆಯುತ್ತಿದ್ದರು. ಈ ಕೆಳಗಿನ ಬರೆಹವು ವೈಯನ್ಕೆಯವರ ಬರೆಹದ ಒಂದು ತುಣುಕು. ಶ್ರೀ ವಿಶ್ವೇಶ್ವರ ಭಟ್ಟರು ವೈಯನ್ಕೆಯವರ ಅನೇಕ ಬರೆಹಗಳನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಈ ಕೆಳಗಿನ ಬರೆಹವನ್ನು ವಿಶ್ವೇಶ್ವರ ಭಟ್ಟರ "ನನ್ನ ಮೆಚ್ಚಿನ ವೈಯನ್ಕೆ" - ಅಂಕಿತ ಪ್ರಕಾಶನ - ಪುಸ್ತಕದಿಂದ ತೆಗೆದುಕೊಂಡಿದ್ದೇನೆ)
- ಮಧುಕರ
ವೈಯೆನ್ಕೆ ಬದುಕಿನ ಬಗ್ಗೆ ಬಹಳ ಗಂಭೀರವಾಗಿ ಯೋಚಿಸಿದವರು. ಪದೇ ಪದೇ ತಮಗೆ ತಾವೇ ಪ್ರಶ್ನೆ ಹಾಕಿಕೊಂಡವರು. ಬದುಕು ಕಟ್ಟಿಕೊಡುವ ಅಗಾಧ ವಿಸ್ತಾರದ ಬಗ್ಗೆ ಚಿಂತಿಸಿದವರು. ಈ ಬದುಕಿಗೆ ಏನಾದರೂ ಅರ್ಥವಿದೆಯಾ ಎಂದು ಸಿಕ್ಕಸಿಕ್ಕವರನ್ನು ಕೇಳಿದವರು. ಈ ಪ್ರಶ್ನೆಯನ್ನು ಯು.ಜಿ.ಕೃಷ್ಣಮೂರ್ತಿ ಮುಂದೆಯೂ ಇಟ್ಟಿದ್ದರು. ಉತ್ತರಗಳನ್ನು ಕಂಡುಕೊಳ್ಳುತ್ತಾ ಆ ಹಾದಿಯಲ್ಲಿ ಹೊಸ ಹೊಸ ಪ್ರಶ್ನೆಗಳನ್ನು ಎದುರಿಸುತ್ತಾ ತಡವರಿಸಿದವರು.
“ವೈಯೆನ್ಕೆ ಅವರೇ, ಈ ಬದುಕಿಗೆ ಅರ್ಥವೇನು?” ಎಂದು ಕೇಳಿದಾಗ ತಮಗೂ ಈ ಪ್ರಶ್ನೆ ಬಹಳ ಕಾಡಿತ್ತು ಎಂದು ಹೇಳಿದ ಅವರು ತಾವೇ ಬರೆದ ಲೇಖನವೊಂದನ್ನು ಕೊಟ್ಟಿದ್ದರು. ಅದನ್ನು ಇಲ್ಲಿ ಪ್ರಸ್ತಾಪಿಸಬಹುದು ಎಂದು ನನಗನಿಸುತ್ತದೆ.
ಮಹಾಭಾರತದಲ್ಲಿ ಒಂದು ಪ್ರಸಂಗ. ಧರ್ಮರಾಯನನ್ನು ಭೇಟಿ ಮಾಡಲೆಂದು ಒಬ್ಬ ಬ್ರಾಹ್ಮಣ ಬಂದಾಗ ಭೀಮ ಎದುರಾದ. ಆ ಬ್ರಾಹ್ಮಣ ತನ್ನ ಉದ್ದೇಶ ತಿಳಿಸಿ ಒಳಗೆ ಹೋದವನು ಕೂಡಲೇ ಹಿಂತಿರುಗಿದ.
ಭೀಮ ಕೇಳಿದ: ಏನು ಸಮಾಚಾರ?
ಬ್ರಾಹ್ಮಣ: ಇಂದು ಧರ್ಮರಾಯನಿಗೆ ನನ್ನ ನೋಡಲು ಬಿಡುವೇ ಇಲ್ಲ. ನಾಳೆ ನೋಡುತ್ತೀನಿ ಅಂತ ಹೇಳಿದ್ದಾನೆ.
ಭೀಮ: ಹೌದಾ? ಏನದ್ಭುತ? ಹಾಗಾದರೆ ನನ್ನ ಅಣ್ಣ ಸಾವನ್ನು ಗೆದ್ದಿದ್ದಾನೆ. ನಾಳೆ ನೋಡ್ತೀನಿ ಅಂತ ಸತ್ಯವಂತ ಧರ್ಮರಾಯ ಹೇಳಿದ ಮೇಲೆ ಹಾಗೇ ತಾನೆ ಅರ್ಥ?
ಅಣ್ಣ ಸಾವನ್ನು ಗೆದ್ದಿದ್ದಾನೆ ಅಂತ ನಗಾರಿ ಬಾರಿಸಲು ಹೊರಟನಂತೆ.
ನಿದ್ದೆಗೊಮ್ಮೆ ನಿತ್ಯಮರಣ,
ಎದ್ದಸಲ ನವೀನ ಜನನ
ಎದ್ದಸಲ ನವೀನ ಜನನ
- ಅನ್ನುವ ನಿಜ ಪರಿಸ್ಥಿತಿಯಲ್ಲಿ ನಾಳೆಯವರೆಗೆ ಬದುಕಿರುತ್ತೇವೆ ಎನ್ನುವುದಕ್ಕೆ ಏನು ಗ್ಯಾರಂಟಿ? ಕಣ್ಣುರೆಪ್ಪೆ ಮುಚ್ಚುವಷ್ಟರಲ್ಲಿ ಜಗತ್ತನ್ನೇ ಬದಲಾಯಿಸುವ ಘಟನೆಗಳು ನಡೆಯುವಾಗ ಜೀವನ ಯಾವ ಕ್ಷಣ ದಿಢೀರ್ ಎಂದು ಮುಗಿಯುವುದೊ ಹೇಳುವರಾರು? ನಾಳೆ ಬೆಳಗ್ಗೆ ಜೀವನ ಅಂತ್ಯ ಎಂದು ಗೊತ್ತಾದರೆ ಕೂಡಲೇ ಜೀವನದ ಮೌಲ್ಯಗಳ ಬಗ್ಗೆ ದೃಷ್ಟಿ ಬದಲಾಯಿಸದೆ ಇದ್ದೀತೆ?
ಒಟ್ಟಿನಲ್ಲಿ ಬದುಕಿನ ಬಗ್ಗೆ ಕಾಳಜಿ ಏಕೆಂದರೆ ಅದರ ನಶ್ವರತೆ. Life is a brief candle – ಜೀವನ ಒಂದು ಸ್ವಲ್ಪ ಹೊತ್ತು ಉರಿಯುವ ಮೋಂಬತ್ತಿ ಎಂದ ಷೇಕ್ಸ್ ಪಿಯರ್. ಅದಕ್ಕೆ ಚತುರಮತಿಯೊಬ್ಬರ ಪ್ರತಿಕ್ರಿಯೆ: life is a brief scandal – ಬಾಳೊಂದು ಕ್ಷಣಿಕ ಕೋಲಾಹಲ. Candle ಅಲ್ಲ scandal.
ಮುಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ
ಪಿಂದೆಸೆಯ ತೆರೆ ಎತ್ತಿ ನೋಡಲಳವಲ್ಲ.
ಈ ದೆಸೆಯಲೆರಡು ದಿನ ನಾವು ನೀವೆಂಬ ನುಡಿ
ಆಡುವೆವು ಬಳಿಕಿಲ್ಲ ನಾವು ನೀವುಗಳು.
ಪಿಂದೆಸೆಯ ತೆರೆ ಎತ್ತಿ ನೋಡಲಳವಲ್ಲ.
ಈ ದೆಸೆಯಲೆರಡು ದಿನ ನಾವು ನೀವೆಂಬ ನುಡಿ
ಆಡುವೆವು ಬಳಿಕಿಲ್ಲ ನಾವು ನೀವುಗಳು.
- ಎಂದ ಉಮರ್ ಖಯ್ಯಂ.
ಮತ್ತೆ ಹೇಳಿದ:
ಪಂಡಿತರು ಶಾಸ್ತ್ರಿಗಳು ಸೂಕ್ಷ್ಮ ಚತುರತೆಯಿಂದ
ಚರ್ಚಿಸಿಹರು ಭಯಲೋಕಗಳ ಮರುಮಗಳ
ಅವರ ಪಾಡೇನಾಯ್ತು ಮಣ್ಣು ಬಾಯನು ಮುಚ್ಚಿ
ಉಳಿದವರಂತವರೆಲ್ಲ ಸೋತು ಮಲಗಿದರು.
ಚರ್ಚಿಸಿಹರು ಭಯಲೋಕಗಳ ಮರುಮಗಳ
ಅವರ ಪಾಡೇನಾಯ್ತು ಮಣ್ಣು ಬಾಯನು ಮುಚ್ಚಿ
ಉಳಿದವರಂತವರೆಲ್ಲ ಸೋತು ಮಲಗಿದರು.
ಜೀವನ ಕ್ಷಣಿಕ, ಆದ್ದರಿಂದಲೇ ಅದಕ್ಕೆ ಅಂಥ ಮಹತ್ವ. ಮಾರ್ಕಂಡೇಯನಂತೆ ಸಾವೇ ಇಲ್ಲದೆ ಹೋದರೆ, ಪಂಜರ ಶಾಶ್ವತ ಆದರೆ ಒಳಗಿನ ಗಿಣಿ ಗತಿ ಏನು? ಗ್ರೀಕ್ ಪುರಾಣದ ಟೆಥಾನಸ್ ಸಾವೇ ಬೇಡವೆಂದ. ವಯಸ್ಸಾಯಿತು. ಕಣ್ಣು ಕಾಣಿಸಲಿಲ್ಲ, ಕಿವಿ ಕೇಳಿಸಲಿಲ್ಲ, ಮಾತು ಹೊರಡಲಿಲ್ಲ. ಅಂಗಾಂಗಗಳು ಶಿಥಿಲವಾಗುತ್ತ ಬಂದವು. ಜೀವಚ್ಛವವಾದ. ಸಾವೇ ಇಂಥ ಸ್ಥಿತಿಯಿಂದ ಬಿಡುಗಡೆ ಎಂದಾಗ ಸಾವೇ ಬರಲಿಲ್ಲ. ಕಡೆಗೆ ಬೇಡಿ ಬೇಡಿ ಸಾವಿನ ವರ ಪಡೆದ.
ಆದರೆ ಹದಿನಾರೇ ಮುಟ್ಟದ ಮಾರ್ಕಂಡೇಯನಂತಾದರೆ? ಚಿರ ಯೌವನ ಇದ್ದರೂ ಒಳಗಿನ ಮನಸ್ಸ್ನ ಗತಿ ಏನು? ಅದು ಮುಪ್ಪಾಗದೆ? ಕೊಳೆಯದೆ? ಎಲ್ಲರಿಗೂ ಅಮರತೆಯ ಕನಸು. ನಹುಷನಂತೆ ಎಲ್ಲರಿಗ್ ಸಶರೀರಿಯಾಗಿ ಸ್ವರ್ಗ ಮುಟ್ಟುವ ಬಯಕೆ. ಸಾಯದೆ ಸ್ವರ್ಗ ಸಿಕ್ಕದೆಂದು ಗೊತ್ತಿಲ್ಲದೆ ಇರುವುದೇ ಇಂಥ ಭ್ರಮೆಗೆ ಕಾರಣ.
ಸರ್ವಭಕ್ಷಕ ಕಾಲನಿಗೆ ಎಲ್ಲರೂ ಆಹುತಿ ಆಗಲೇಬೇಕಾಗಿರುವಾಗ ಬದುಕಿದ್ದಾಗ ಏನು ಮಾಡಬಹುದು? ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ’ ಎಂದು ಇಂದಿನ ಜೆಟ್ ಯುಗದಲ್ಲೂ ಸುಮ್ಮನೆ ಆದದ್ದಾಗಲಿ ಎಂದಿರಬೇಕೆ?
ಇಡೀ ಜಗತ್ತೇ ಒಂದು ನಾಟಕ ರಂಗ. ನಾವೆಲ್ಲ ನಟರು. ಆಡಿಸುವವನು, ನಮ್ಮ ಕೈಯಲ್ಲಿ ಮಾತಾಡಿಸುವವನೂ ಅವನೇ ಎಂದು ಶರಣಾಗುವುದೆ? ಜಗತ್ತು ರಂಗಮಂದಿರ-ಸ್ಟೇಜ್ ಇರಬಹುದು. ಆದರೆ ಸುಸ್ತಾದಾಗ ಸುಧಾರಿಸಿಕೊಳ್ಳೋಕೆ ಸೈಡ್ ವಿಂಗ್ಸೇ ಇಲ್ಲ – ನೇಪಥ್ಯವೇ ಇಲ್ಲ ಎಂದ ಕೈಲಾಸಂ ಪಾತ್ರಧಾರಿ ಮಾತಿಗೆ ತಲೆ ತೂಗೋಣವೇ?
What is your conception of life – ಎಂಬ ಪ್ರಶ್ನೆಗೆ ಕೈಲಾಸಂ ಉತ್ತರ ಕೊಟ್ಟಹಾಗೆ life is a product of conception ಎಂಬ ಹಾಸ್ಯದ ಉತ್ತರದಲ್ಲೇ ಮರೆಯೋಣವೇ?
ಬಾಳಿಗೇನು ಅರ್ಥ? Life is a tale told by an idiot full of sound and fury signifying nothing ಬಾಳು ಸದ್ದು ಗದ್ದಲದಿಂದ ಕೂಡಿದ ಗಾಂಪ ಹೇಳಿದ ಕತೆ – ಅದಕ್ಕೆ ಏನೂ ಅರ್ಥವೇ ಇಲ್ಲ – ಎಂದ ಷೇಕ್ಸ್ ಪಿಯರ್.
ಬಾಳಿಗೊಂದು ಗುರಿ ಇರಬೇಕೆ? ನಂಬಿಕೆ ಇರಬೇಕೆ? ಇರಬೇಕೆಂದರೆ ಅದನ್ನು ನಿರ್ಧರಿಸುವವರು ಯಾರು? ಸೃಷ್ಟಿಯ ಕೋಟಿ ಕೋಟಿ ಜೀವಿಗಳಲ್ಲಿ ಒಬ್ಬರಾದ ನಮ್ಮ ಬಗ್ಗೆ ಸೃಷ್ಟಿಗೇನು ಕಾಳಜಿ? ಒಂದು ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಸರ್ವಶಕ್ತಿ ಬಳಸುವುದೊಂದೇ ನಾವು ಮಾಡಬಹುದಾದ ಕೆಲಸ. ಗೌರೀಶಂಕರ ಹತ್ತುತ್ತಾರೆ, ಸಮುದ್ರದಲ್ಲಿ ಈಜುತ್ತಾರೆ, ಅಣು ರಹಸ್ಯ ಸಿಡಿಸುತ್ತಾರೆ, ಸಂಗೀತ, ಕಲೆ, ಸಾಹಿತ್ಯಗಳಲ್ಲಿ ಅಗಾಧ ಸಾಧಿಸುತ್ತಾರೆ. ಯಾರು ಯಾರಿಗಿಂತ ಶ್ರೇಷ್ಠರು? ಐನ್ ಸ್ಟೈನ್? ಸಾಕ್ರಟೀಸ್? ಗಾಂಧಿ? ಬ್ರಾಡ್ಮನ್? ಬುದ್ಧ? ನಿರ್ಧರಿಸುವವರು ಯಾರು?
ಯಾರ ಕಟ್ಟುಪಾಡಿಗೂ ಕೇರ್ ಮಾಡದೆ ಪ್ರಕೃತಿ ಕಾರ್ಯನಿರತವಾಗಿರುತ್ತದೆ. ಬಹುಶಃ ಅದರ ನಿಯಮಗಳನ್ನು ಪತ್ತೆ ಹಚ್ಚುವುದೇ ಮಹತ್ವದ ಅಂಶವಾಗಬಹುದು. ಪ್ರಕೃತಿಯಲ್ಲಿ Invention – ಸೃಷ್ಟಿ ಇಲ್ಲ, discovery – ಶೋಧನೆ ಇದೆ.
ಬಾಳೆ ಒಂದು ವಿಸ್ಮಯ – Wonder – ಅದು ಮುಗಿದರೆ ಬಾಳೇ ಮುಗಿದಂತೆ. People die at thirty, buried at sixty ಎನ್ನುತ್ತಾರೆ. ಜನ ಮೂವತ್ತಕ್ಕೆ ಸಾಯುತ್ತಾರೆ, ಅವರನ್ನು ಹೂಳುವುದು ಅರವತ್ತರಲ್ಲಿ – ಎಂದರೆ ಕಾರ್ಖಾನೆ ಉತ್ಪಾದಿಸುವ ದಿನಗಳಂತೆ. ‘ದಿನಮಪಿ ರಜನೀ ಸಾಯಂಪ್ರಾತಃ’ ರಾತ್ರಿ ಹಗಲು ಬೆಳಗ್ಗೆ ಸಂಜೆ ಅಂತ ದಿನ ಎಡಬಿಡದೆ ಉರುಳುವಂತೆ ಇರುವಾಗ, ಬಾಳು ಚರ್ವಿತ ಚರ್ವಣವಾದಾಗ ಅರ್ಥವೇನು?
ಬಾಳಿಗೊಂದು ಅರ್ಥ ಇರಬೇಕೆ? – ಎಂದೂ ಕೇಳುವ ನಿರಂಕುಶಮತಿಗಳಿದ್ದಾರೆ. ಪ್ರಕೃತಿಯಲ್ಲಿ ಸದಾ ಚೈತನ್ಯವಿದೆ. ಪ್ರಾಣಿಗಳೂ, ಸಸ್ಯಗಳೂ ಇಂಥ ಅರ್ಥ ಹುಡುಕದೆ ಬಾಳುತ್ತಿರುವಾಗ ಮನುಷ್ಯನೊಬ್ಬನಿಗೆ ಏಕೆ ಈ ಪಾಡು? ಪ್ರಕೃತಿಯೊಂದಿಗೆ ಸಮರಸದಿಂದಿರುವ ಬದಲು ಅವನು ಬೇರೆಯಾಗಿದ್ದೇ ಇವನ ಗತಿಗೆ ಕಾರಣ ಎನ್ನುತ್ತಾರೆ. ಆಗಲೇ ಅವನಿಗೆ ಒಂಟಿತನ ಅಂದರೆ ಏನೆಂದು ಗೊತ್ತಾಯಿತು. ಜೀವನದ ಮುಖ್ಯ ಸಮಸ್ಯೆ ಎಂದರೆ ಒಂಟಿತನವೇ. ಇದೇ ಮನುಷ್ಯ ನಿರ್ಮಿಸಿಕೊಂಡ ಧರ್ಮ, ಮತಗಳ ಮೂಲ. Hope and fear ಪಾರಿತೋಷಕ – ಭಯಾನಕ ಎಂದ ಕೃಷ್ಣ ಗೀತೆಯಲ್ಲಿ. ದೇವರು, ಧರ್ಮ ಕಲ್ಪಿಸುವುದಕ್ಕೆ ಇದೇ ಆಧಾರ. ಏನಾದರೂ ಒಳ್ಳೆಯದು ಆಗುತ್ತೆ ಎಂದು ದೇವಾಲಯಗಳಿಗೆ ಹೋಗುತ್ತಾರೆ. ವ್ರತ ಕೈಗೊಳ್ಳುತ್ತಾರೆ, ಪೂಜೆ ಮಾಡುತ್ತಾರೆ. ಮಾಡದಿದ್ದರೆ ಏನೋ ಆದೀತೆಂಬ ಭಯ. ಆಶೆ, ಭಯ ಇವೇ ಇವೆಲ್ಲದರ ಮೂಲ.
ಹುಟ್ಟು ಸಾವಿಗೆ ಪರಿಹಾರವಿಲ್ಲ – ಇರುವಾಗ ಜೀವನ ಸವಿಯುವುದೊಂದೇ ಸಾಧ್ಯ – There is no cure for birth and death save enjoy the interval ಎಂದ ಸಾಂತಾಯನ.
ಆದರೆ ಸವಿಯುವುದು ಹೇಗೆ?
ನಾವು ಏನು ಮಾಡಲಿ ಮಾಡದಿರಲಿ ಕಾಲ ಮುಂದೋಡುತ್ತಿರುತ್ತದೆ. ವಯಸ್ಸಾಗುತ್ತಿರುತ್ತದೆ. ಕಾಲಕ್ರೀಡತಿ ಗಚ್ಛತ್ಯಾಯಃ. ಗಡಿಯಾರದ ಪೆಂಡ್ಯುಲಂ ಹಿಂದೆ ಮುಂದೆ ಆಡಿದರೂ ಕಾಲ ಹೋಗುವುದು ಮುಂದಕ್ಕೇ.
ಮಹಾಭಾರತ, ಬ್ರಹ್ಮಸೂತ್ರ ಬರೆದ ವ್ಯಾಸನಿಗೆ ನಿರರ್ಥಕತೆಯ ಭಾವನೆ ಬಂತು. ಕರಗುತ್ತಿರುವ ಮಂಜಿನಂತೆ ಕಾಲ ಕಳೆದುಹೋಗುತ್ತಿದೆ. ಏನು ಮಾಡಬಹುದೆಂದು ಗೊತ್ತಾಗದಿದ್ದಾಗ ನಾರದ ಬಂದ. ಭಾಗವತ ಬರಿ ಅಂದ.
ಹೀಗೆ ಕಾಲ ಕಳೆಯುವುದು ಹೇಗೆಂದು ಗೊತ್ತಾಗದಾಗ ಏನಾದರೂ ಸಾಧನೆಗೆ ಯತ್ನಿಸುತ್ತಾರೆ. ಇದರಿಂದಲೇ ಜಗತ್ತು ಬೆಳೆದಿದ್ದು, ನಾಗರೀಕತೆ ಬೆಳೆದಿದ್ದು – ಸಂಗೀತ, ಸಾಹಿತ್ಯ, ಕಲೆ, ವಿಜ್ಞಾನ ಬೆಳೆದಿದ್ದು.
ಇಂಗ್ಲೀಷ್ ನಲ್ಲಿ ಹೇಳುವಂತೆ Killing the time ಅಕ್ಷರಶಃ ಭಾಷಾಂತರಿಸಿದರೆ ಕಾಲ ಕೊಲ್ಲುವುದು – ಇದೇ ಸಮಸ್ಯೆ. ಆದರೆ ಕೊನೆಗೆ ನಮ್ಮನ್ನು ಕೊಲ್ಲುವುದು ಕಾಲವೇ.
ಫ್ರಾನ್ಸಿನ ಖ್ಯಾತ ವಿಚಾರವಾಗೆ ವಾಲ್ಟೇರ್ ಬರೆದ ಸದ್ ಬ್ರಾಹ್ಮಣನ ಕತೆ ಇದು: ಆ ಬ್ರಾಹ್ಮಣನಿಗೆ ನಲವತ್ತು ವಯಸ್ಸು. ತಾನು ಏನು, ತನ್ನ ವಿಚಾರಗಳಿಗೆ ಮೂಲ ಏನು, ಈ ಜಗತ್ತು ಏನು – ಏನೂ ಅರ್ಥವಾಗುತ್ತಿಲ್ಲ. ಸದಾ ಅತೃಪ್ತಿ.
ಇದನ್ನು ಹಿರಿಯನೊಬ್ಬನಿಗೆ ವಿವರಿಸಿದಾಗ ಅವನು ಹೇಳುತ್ತಾನೆ: ‘ಅಯ್ಯೋ ದರಿದ್ರವೇ, ನಿನ್ನ ಮನೆಯ ಹತ್ತು ಮಾರು ದೂರದಲ್ಲಿರುವ ಮುದುಕೀನ ನೋಡು. ಅವಳಿಗೆ ದೇವರ ಹತ್ತವತಾರಗಳಲ್ಲಿ ನಂಬಿದೆ. ಸಾಯುವಾಗ ಬಾಯಿಗೆ ಗಂಗೆ ಸಿಕ್ಕರೆ ಸಾಯುಜ್ಯ ಅಂತ ನಂಬಿಕೊಂಡು ಹಾಯಾಗಿ ಸುಖವಾಗಿದ್ದಾಳೆ. ಅವಳನ್ನು ನೋಡಿ ಕಲಿಯಕ್ಕೆ ಆಗಲ್ಲವೆ?’
ಅದಕ್ಕೆ ಬ್ರಾಹ್ಮಣನ ಉತ್ತರ: ‘ಇಲ್ಲ ಖಂಡಿತ ಇಲ್ಲ. ಅಂಥ ಸಂತೃಪ್ತಿಗಿಂತ ಈಗಿನ ಎಲ್ಲವನ್ನೂ ಅರಸುವ ಅತೃಪ್ತಿಯೇ ಇರಲಿ.’
ಇದೇ ಅತೃಪ್ತಿ ಬಹುಶಃ ದೈವಿಕ ಅತೃಪ್ತಿ – Divine discontent. ಇದೇ ಮನುಷ್ಯನ ವೈಶಿಷ್ಟ್ಯ. ಇದೇ ಅವನ ಸದಾ ಕೊರಗಿಗೂ ಸಾಧನೆಗೂ ಪ್ರಚೋದನೆ. ಆಡು, ಕೋಡುಗ, ಕತ್ತೆಗಳಿಗಿಲ್ಲದ ಚಿಂತೆ ಮನುಷ್ಯನಿಗೆದೆ. ಆಕಾಶ, ಭೂಮಿ ಸೇರಿ ಆಗಿರುವ ಮನುಷ್ಯನ ಗುರಿಯೆಲ್ಲ ಮೇಲಕ್ಕೇ – ಊಪರ್ ವಾಲಾ ಕಡೆಯೇ. ಅದಕ್ಕೇ ಮನುಷ್ಯನಿಗೆ, ಪ್ರಾಣಿಗಳಿಗಿಲ್ಲದ ಗೊಂದಲ.
ನಮ್ಮ ಮನೆಯ ನಾಯಿಗಿಲ್ಲ
ನನ್ನೆದುರಿನ ಈ ಭರ್ಜರಿ ಸೇಬಿನ ಮರಕ್ಕಿಲ್ಲ
ಮೇಲೆ ಎರಚಿದ ನಕ್ಷತ್ರ ರಾಶಿಗಿಲ್ಲ
ಮನುಷ್ಯ ಮಾತ್ರನಾದ ನನಗೆ ಮಾತ್ರ
ದಕ್ಕಿದ ಭ್ರಾಂತಿ, ಮದ್ದೇ ಇಲ್ಲದ ಭ್ರಮೆ.
ದೇಹದೊಂದಿಗೇ ಒಕ್ಕರಿಸಿದ ಸಂದೇಹ’
ನನ್ನೆದುರಿನ ಈ ಭರ್ಜರಿ ಸೇಬಿನ ಮರಕ್ಕಿಲ್ಲ
ಮೇಲೆ ಎರಚಿದ ನಕ್ಷತ್ರ ರಾಶಿಗಿಲ್ಲ
ಮನುಷ್ಯ ಮಾತ್ರನಾದ ನನಗೆ ಮಾತ್ರ
ದಕ್ಕಿದ ಭ್ರಾಂತಿ, ಮದ್ದೇ ಇಲ್ಲದ ಭ್ರಮೆ.
ದೇಹದೊಂದಿಗೇ ಒಕ್ಕರಿಸಿದ ಸಂದೇಹ’
- ಎಂದು ಕವಿ ಹೇಳಿದ ಸ್ಥಿತಿ ವಿಚಾರವಂತರದು.
ಬಾಳಿನಲ್ಲಿ ಶಾಶ್ವತ ಯಾವುದು ಎಂದರೆ ಬದಲಾವಣೆ ಮಾತ್ರ. ಜೀವ ನಿಂತ ನೀರಲ್ಲ, ನಿಂತಾಗ, ಜಡ್ಡುಗಟ್ಟಿದಾಗ ಸಾವು. ಬಾಳಿನಲ್ಲಿ ಉತ್ಕಟ ಕ್ಷಣಗಳು ಬರುತ್ತವೆ ಹೋಗುತ್ತವೆ. ಅತ್ಯಂತ ಆನಂದದ ಕ್ಷಣ, ಅತ್ಯಂತ ದುಃಖದ ಘಳಿಗೆಗಳೂ ಬಂದು ಹೋಗುತ್ತವೆ.
ಮನುಷ್ಯನಿಗೆ ಸದಾ ಆನಂದ ಇರಬೇಕು – ರೋಗ ರುಜಿನ ಇರಬಾರದು. ಸುಖ ನಿರಂತರವಾಗಿ ಮುಂದುವರಿಯುತ್ತಿರಬೇಕು. ಇದೇ ಸ್ವರ್ಗದ ಕಲ್ಪನೆಗೆ ಆಧಾರ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ’ ಹೋಗಬೇಕೆನ್ನುವುದೇ ಎಲ್ಲರ ಆಶೆ. ಆದರೆ ಅದು ಹೇಗೆ ಸಾಧ್ಯ? ಅದಕ್ಕೇ ನೂರಾರು ಪೂಜೆ, ವ್ರತ, ಸಾಧನೆ, ಧ್ಯಾನ, ಯಂತ್ರ, ಮಂತ್ರ, ತಂತ್ರಗಳ ಮಾರ್ಗ ಹುಡುಕುತ್ತಾರೆ.
ಆದರೆ ಏನೇ ಆದರೂ ಕೊನೆ ಒಂದೇ.
ರಷ್ಯದ ಕಾದಂಬರಿಕಾರ ಟಾಲ್ ಸ್ಟಾಯ್, ಪ್ರಕೃತಿ ಒಂದು ಸಾರಿಯಾದರೂ ತನ್ನ ನಿಯಮ ಬದಲಾಯಿಸಿ ತನ್ನನ್ನು ಅಮರನನ್ನಾಗಿ ಮಾಡಬಾರದೇ? ಎಂದು ಕೊಳ್ಳುತ್ತಿದ್ದನಂತೆ. ಕಡೆಗೆ ಸಾಹಿತಿ ಗಾರ್ಕಿಗೆ ತಂತಿ ಬಂತು. ಟಾಲ್ ಸ್ಟಾಯ್ ನಿಧನ. ದೇವರಲ್ಲಿ ಗಾರ್ಕಿ ನಂಬಿಕೆ ಬಗ್ಗೆ ಕೆಣಕುತ್ತಿದ್ದ ಟಾಲ್ ಸ್ಟಾಯ್ ಸಾವು ಸುದ್ದಿ ಕೇಳಿದಾಗ ಗಾರ್ಕಿ ಹೇಳಿದ: ‘ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಟಾಲ್ ಸ್ಟಾಯ್ ಅಂತೂ ದೇವರಂಥ ಮನುಷ್ಯ.’
ಮತ್ತೆ ಉಮರ್ ಖಯ್ಯಂ ನೆನೆಯಬಹುದು.
Then to the rolling heaven itself I cried
What lamp has Destiny to guide
Her little children stumbling in the dark.
`A blind understanding’ heaven replied.
What lamp has Destiny to guide
Her little children stumbling in the dark.
`A blind understanding’ heaven replied.
ಕತ್ತಲಲ್ಲಿ ಮುಗ್ಗರಿಸುತ್ತಿರುವ ಮಕ್ಕಳಿಗೆ ದಾರಿದೀಪ ತೋರೆಂದು ಆಕಾಶಕ್ಕೆ ಕೋರಿದಾಗ ಬಂದ ಉತ್ತರ: ಕುರುಡು ನಂಬಿಕೆ, ಕುರುಡು ನಂಬಿಕೆ.
ನಮ್ಮ ಡಿ.ವಿ.ಜಿ ಯವರೂ ಇದೇ ಹೇಳಿದ್ದಾರೆ.
ಕತ್ತಲಲ್ಲಿ ಏನೇನೋ ಕಂಡು ಬೆದರಿದ ನಾಯಿ
ಮತ್ತೊಬ್ಬ ಸಖನಲ್ಲಿ ಇಹನೆಂದು ನಂಬಿ
ಕತ್ತೆತ್ತಿ ಗೋಳಿಡುತ ಬೊಗಳಿ ಹಾರಾಡುವುದು
ಭಕ್ತಿಯಂತೆಯೆ ನಮದು ಮಂಕುತಿಮ್ಮ.
ಮತ್ತೊಬ್ಬ ಸಖನಲ್ಲಿ ಇಹನೆಂದು ನಂಬಿ
ಕತ್ತೆತ್ತಿ ಗೋಳಿಡುತ ಬೊಗಳಿ ಹಾರಾಡುವುದು
ಭಕ್ತಿಯಂತೆಯೆ ನಮದು ಮಂಕುತಿಮ್ಮ.
ಕೋಟಿ ಕೋಟಿ ಗ್ರಹ ತಾರೆಗಳ ವಿಶಾಲ ವಿಶ್ವದಲ್ಲಿ ಒಂದು ಕ್ಷಣದಂತಿರುವ ಮಾನವ ಏನು ಮಾಡಬಹುದು? ಈ ಕತ್ತಲಿನ ಮೊತ್ತದಲ್ಲಿ ಹೊರಳುತ್ತಿರುವ ಈ ಸುಂದರ ವಸುಂಧರೆಯಲ್ಲಿ ನಿಂತು ಈ ಬಾಳೆಂಬ ವಿಸ್ಮಯ ಕಂಡು ಬೆರಗಾಗುವುದು ಬಿಟ್ಟು ಇನ್ನೇನು ಮಾಡಬಹುದು?
ಬದುಕಿನ ಬಗ್ಗೆ ವೈಯನ್ಕೆ ಅವರ ಚಿಂತನೆಯಿದು!
ಇದು ಬರೆದ ಕೆಲವು ವರ್ಷಗಳ ನಂತರ, ಅನೇಕ ಸಂಗತಿಗಳ ಬಗ್ಗೆ ತಮ್ಮ ವಿಚಾರ ಬದಲಾಗಿದೆಯೆಂದು ಅವರು ಹೇಳುತ್ತಿದ್ದರು. ಕಾರಣ ಅವರ ಬದುಕಿನ ಗತಿಯೂ ಬದಲಾಗಿತ್ತು. ಬದುಕು ಚಲನಶೀಲವಾಗಿಲ್ಲದಿದ್ದರೆ ಈ ಲೇಖನ ಶಾಶ್ವತ. ಆದರೆ ನಮ್ಮ ಬದುಕು ಹಾಗಿಲ್ಲವಲ್ಲ. ಹಾಗೆಂದು ಅವರು ಹೇಳುತ್ತಿದ್ದರು.
Hello Madhukar,
ReplyDeleteThanks for publishing this article from wonder kanDer.
I have been a YNK fan and enjoyed every bit of this article.